ಸರ್ದಾರ್ ಪಟೇಲರು ಹುಟ್ಟಿದ್ದು ಅಕ್ಟೋಬರ್ 31 1875ರ ವರ್ಷದಲ್ಲಿ. ನಿರ್ಣಯಗಳಲ್ಲಿ ‘ಉಕ್ಕಿನ ಮನುಷ್ಯ’ರಾಗಿ, ಹೃದಯವಂತಿಕೆಯಲ್ಲಿ, ರಾಷ್ಟ್ರೀಯ ಸೇವೆಯಲ್ಲಿ, ಎಲ್ಲ ರೀತಿಯ ಕ್ರಿಯಾಶೀಲತೆಯಲ್ಲಿ ಮಹಾ ಮಾನವರಾದ ಪಟೇಲರು ಸಾರ್ವಕಾಲಿಕವಾಗಿ ನಮ್ಮ ಭಾರತೀಯ ಹೃದಯಗಳಲ್ಲಿ ಪ್ರಜ್ವಲಿತ ಹಣತೆಯಂತೆ ಬೆಳಗುತ್ತಲೇ ಇದ್ದಾರೆ. ಗುಜರಾತಿನ ನಡಿಯಾದ್ ಪಟೇಲರು ಹುಟ್ಟಿದ ಊರು.
ಪಟೇಲರು ಶಾಲೆ ಸೇರಿದ್ದು ತಡವಾಗಿ. ಪಟೇಲರು ಮ್ಯಾಟ್ರಿಕ್ ಪರೀಕ್ಷೆ ಕಟ್ಟಿದಾಗ ಅವರಿಗೆ 22 ವರ್ಷ! ಮುಂದೆ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದ ವಲ್ಲಭಭಾಯ್ ಅವರು ಕಾಲೇಜು ವಿದ್ಯಾಭ್ಯಾಸದ ಯಾವುದೇ ಹಿನ್ನೆಲೆ ಇಲ್ಲದಿದ್ದರೂ ಬ್ಯಾರಿಸ್ಟರ್ ಪದವಿ ಪರೀಕ್ಷೆಯಲ್ಲಿ ತರಗತಿಗೇ ಪ್ರಥಮರಾಗಿ ಉತ್ತೀರ್ಣರಾದರು. ಅಲ್ಲಿಂದ ಹಿಂತಿರುಗಿ ಅಹಮದಾಬಾದಿನಲ್ಲಿ ನೆಲೆನಿಂತು, ಅಲ್ಲಿನ ಅಗ್ರಮಾನ್ಯ ಬ್ಯಾರಿಸ್ಟರುಗಳಲ್ಲಿ ಒಬ್ಬರೆಂದು ಹೆಸರಾದರು.
1918ರಲ್ಲಿ ಪಟೇಲರು ಚೆನ್ನಾಗಿ ನಡೆಯುತ್ತಿದ್ದ ತಮ್ಮ ವಕೀಲಿ ವೃತ್ತಿ, ಅದರ ಘನತೆ, ಗೌರವ, ದೊಡ್ಡ ಮನೆ, ಸಂಪತ್ತು ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದ ಸರಳ ಜೀವನ ಮತ್ತು ಕಷ್ಟಕಾರ್ಪಣ್ಯಗಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಗುಜರಾತಿನ ಖೇಡಾ ವಿಭಾಗವು ತೀವ್ರ ಕ್ಷಾಮದಿಂದ ತತ್ತರಿಸುತ್ತಿದ್ದು, ಅಲ್ಲಿಯ ರೈತರು ಕರ ವಿನಾಯಿತಿಗೆ ಬೇಡಿಕೆಯಿಟ್ಟರು. ಗಾಂಧಿಯವರು ಚಂಪಾರಣ್ ಚಟುವಟಿಕೆಗಳಲ್ಲಿ ನಿರತರಾಗಿದ್ದ ಕಾರಣ ಪಟೇಲರು ಖೇಡಾ ಹೋರಾಟದ ನೇತೃತ್ವ ವಹಿಸಿದರು. ತಮಗೆ ಬೆಂಬಲವಾಗಿ ನಿಂತ ನರಹರಿ ಪಾರೀಖ್, ಮೋಹನಲಾಲ್ ಪಾಂಡ್ಯ, ಸಾರಾಭಾಯಿ, ಅಬ್ಬಾಸ್ ತ್ಯಾಬ್ಜೀ ಅವರುಗಳೊಂದಿಗೆ ರಾಜ್ಯಾದ್ಯಂತ ಎಲ್ಲ ವರ್ಗದ ಜನರೂ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಬ್ರಿಟಿಷ್ ಸರ್ಕಾರವನ್ನು ಮಣಿಸಿ ಯಶಸ್ಸು ಪಡೆದ ರೀತಿ, ಅವರಿಗೆ ಭಾರತದಾದ್ಯಂತ ರಾಜಕೀಯ ಧುರೀಣರೆಲ್ಲರ ಮೆಚ್ಚುಗೆಯನ್ನು ತಂದಿತು. 1919ರಿಂದ 1928ರ ವರೆಗೆ ಪಟೇಲರು ಅಸ್ಪ್ರಶ್ಯತೆ, ಮದ್ಯಪಾನ, ಬಡತನ ಹಾಗೂ ಅಜ್ಞಾನಗಳ ವಿರುದ್ಧವಾಗಿ ವ್ಯಾಪಕವಾಗಿ ಕಾರ್ಯನಿರ್ವಹಿಸಿದರು. 1922ರಲ್ಲಿ ಪಟೇಲರು ಅಹಮದಾಬಾದಿನ ಮುನಿಸಿಪಾಲಿಟಿಯ ಅಧ್ಯಕ್ಷರಾಗಿ ಚುನಾಯಿತರಾದರು. ಇವರ ಆಡಳಿತಾವಧಿಯಲ್ಲಿ ಅಹಮದಾಬಾದ್ ನಗರವು ವಿದ್ಯುತ್ ಸರಬರಾಜು, ಚರಂಡಿ, ನೈರ್ಮಲ್ಯ ವ್ಯವಸ್ಥೆ ಹಾಗೂ ಶಿಕ್ಷಣ ವ್ಯವಸ್ಥೆಗಳಲ್ಲಿ ಭಾರೀ ಸುಧಾರಣೆಗಳನ್ನು ಕಂಡಿತು.
1928ರಲ್ಲಿ ಬಾರ್ಡೋಲಿ ಪ್ರದೇಶ ದುರವಸ್ಥೆಗೀಡಾಯಿತು. ಗುಜರಾತಿನ ಬಹುತೇಕ ಭಾಗಗಳು ಕ್ಷಾಮದಿಂದ ತತ್ತರಿಸುವುದರೊಂದಿಗೆ, ಸರ್ಕಾರ ಕಂದಾಯವನ್ನೂ ಹೆಚ್ಚು ಮಾಡಿತು. ಇದರ ವಿರುದ್ಧವಾಗಿ ಪಟೇಲರು ಜನಸಮೂಹವನ್ನು ಒಟ್ಟುಗೂಡಿಸಿ ನಡೆಸಿದ ಪ್ರತಿಭಟನೆಯು ದೇಶದಲ್ಲೆಲ್ಲ ಪ್ರಸಿದ್ಧಿ ಪಡೆಯಿತು. ಖೇಡಾ ಸತ್ಯಾಗ್ರಹಕ್ಕಿಂತ ಉಗ್ರವಾಗಿದ್ದ ಈ ಪ್ರತಿಭಟನೆಗೆ ಬೆಂಬಲವಾಗಿ ಗುಜರಾತಿನ ಅನೇಕ ಕಡೆಗಳಲ್ಲಿ ಜನರು ಸತ್ಯಾಗ್ರಹ ಹೂಡಿದರು. ಈ ಎರಡೂ ಹೋರಾಟಗಳು ಮುಗಿದ ನಂತರದಲ್ಲಿ ಪಟೇಲರು, ಜನಸಾಮಾನ್ಯರು ಕಳೆದುಕೊಂಡಿದ್ದ ಭೂಮಿಕಾಣಿ ಹಾಗೂ ಆಸ್ತಿಪಾಸ್ತಿಗಳನ್ನು ಮತ್ತೆ ಅವರಿಗೆ ಹಿಂದಿರುಗಿಸಿಕೊಡಲು ಹಗಲೂರಾತ್ರಿ ಶ್ರಮಿಸಿದರು. ಬಾರ್ಡೋಲಿಯ ಸತ್ಯಾಗ್ರಹದಿಂದ ಪಟೇಲರಿಗೆ ಸರ್ದಾರ್ ಎಂಬ ಬಿರುದು ಪ್ರಾಪ್ತವಾಯಿತು. ಗುಜರಾತಿನ ಲಕ್ಷಾಂತರ ಜನರಿಗೆ ಪಟೇಲರು ಆರಾಧ್ಯದೈವವಾದರು.
ಜಿನ್ನಾರ ನಾಯಕತ್ವದಲ್ಲಿ ದಿನೇದಿನೇ ಹೆಚ್ಚುತ್ತಿದ್ದ ಮುಸ್ಲಿಮ್ ಪ್ರತ್ಯೇಕತಾ ಬೇಡಿಕೆಯಿಂದ ಭಾರತದ ವಿಭಜನೆ ಅನಿವಾರ್ಯ ಎಂಬ ನಿರ್ಣಯಕ್ಕೆ ಬಂದ ಮೊದಮೊದಲ ಕಾಂಗ್ರೆಸ್ ನಾಯಕರುಗಳಲ್ಲಿ ಪಟೇಲರೂ ಒಬ್ಬರಾಗಿದ್ದರು. ಈ ವಿಷಯದಲ್ಲಿ ಅತ್ಯಂತ ದುಃಖಿಗಳಾಗಿದ್ದ ಗಾಂಧಿಯನ್ನು ವಿಭಜನೆಯ ಅನಿವಾರ್ಯತೆಯ ಬಗ್ಗೆ ಒಪ್ಪಿಸುವ ಕಾರ್ಯವನ್ನು ಪಟೇಲರೇ ವಹಿಸಿಕೊಂಡರು.
ಪಾರ್ಟಿಷನ್ ಕೌನ್ಸಿಲ್ಲಿನಲ್ಲಿ ಭಾರತದ ಪರವಾದ ಸದಸ್ಯರಾಗಿ ಪಟೇಲರು ಸರಕಾರಿ ಆಡಳಿತ ಯಂತ್ರಗಳ, ಆಸ್ತಿಪಾಸ್ತಿಗಳ ಸೂಕ್ತಹಂಚಿಕೆಯ ಮೇಲುಸ್ತುವಾರಿ ವಹಿಸಿದ್ದರು. ನೆಹರೂ ಮತ್ತು ಪಟೇಲರು ಜಂಟಿಯಾಗಿ ಕೇಂದ್ರ ಮಂತ್ರಿಮಂಡಲವನ್ನು ನಿರ್ಣಯಿಸಿ, ಪಟೇಲರು ಉಪಪ್ರಧಾನಿಯಾಗಿ ಗೃಹಖಾತೆಯನ್ನು ವಹಿಸಿಕೊಂಡರು.
ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ, 565 ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಅಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ, ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ, ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಪಟೇಲರು ಹೊತ್ತುಕೊಂಡು ಯಶಸ್ವಿಯಾಗಿ ನಿರ್ವಹಿಸಿದರು. ಅಷ್ಟೇ ಅಲ್ಲದೆ ಅಧಿಕಾರದ ವಿಕೇಂದ್ರೀಕರಣ, ಧಾರ್ಮಿಕ ಸಮಾನತೆ ಮತ್ತು ಸ್ವಾತಂತ್ರ್ಯ, ಆಸ್ತಿ ಹಕ್ಕು ಇತ್ಯಾದಿ ವಿಷಯಗಳನ್ನು ವಿಷದೀಕರಿಸಿ, ಭಾರತದ ಸಂವಿಧಾನದ ರಚನೆಯಲ್ಲಿ ಮಹತ್ವದ ಕೊಡುಗೆಯನ್ನು ನೀಡಿದರು. ಪಟೇಲರ ಕುಶಲ ಸಂಧಾನದಿಂದಾಗಿ ಕಾಶ್ಮೀರ, ಹೈದರಾಬಾದು ಮತ್ತು ಜುನಾಘಢ ರಾಜ್ಯಗಳನ್ನು ಹೊರತುಪಡಿಸಿ ಬಾಕಿ ಎಲ್ಲಾ ಸಂಸ್ಥಾನಗಳೂ ವಿಲೀನಕ್ಕೆ ಒಪ್ಪಿದ್ದವು. ಜುನಾಘಡದ ರಾಜ ಮತ್ತು ಹೈದರಾಬಾದಿನ ನಿಜಾಮರ ಮೇಲೆ ಬಿಸಿ ಮುಟ್ಟಿಸಿ ಭಾರತದಲ್ಲಿ ಒಂದಾಗಿಸಿದರು.
ಪಟೇಲರ ಅಪ್ರತಿಮ ಸೇವೆಯನ್ನು ಗಮನದಲ್ಲಿಟ್ಟು ಅವರನ್ನು ಭಾರತದ ‘ಬಿಸ್ಮಾರ್ಕ್’ ಎಂದೇ ಕರೆಯಲಾಗುತ್ತದೆ. ಭಾರತದ ಅಪ್ರತಿಮ ಪುತ್ರ ಸರ್ದಾರರು ಭಾರತೀಯರ ಜನಮಾನಸದಲ್ಲಿ ನಿರಂತರವಾಗಿ ಮನೆಮಾಡಿರುವ ಅನರ್ಘ್ಯ ರತ್ನ. ಈ ಮಹಾನ್ ನಾಯಕರ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು.
No comments:
Post a Comment